ಗೋಪಾಲ-
	ಬಂಗಾಳದಲ್ಲಿ ಆಳಿದ ಪಾಲವಂಶದ ಮೊದಲ ಅರಸ. ಮಗಧ ಸಾಮ್ರಾಜ್ಯ ಅಸ್ತಂಗತವಾದ ಅನಂತರ ವಂಗದೇಶದಲ್ಲಿ ಪಾಲವಂಶ ಕ್ರಿ.ಶ. 8ನೆಯ ಶತಮಾನದ ಮಧ್ಯಭಾಗದಲ್ಲಿ ಅಸ್ತಿತ್ವಕ್ಕೆ ಬಂತು. ಯಶೋವರ್ಮ, ಕಾಶ್ಮೀರದ ಲಲಿತಾದಿತ್ಯ, ಶೈಲರು, ಭಗದತ್ತರು ಮುಂತಾದವರ ದಾಳಿಗಳಿಗೆ ತುತ್ತಾದ ವಂಗದೇಶದಲ್ಲಿ ಅಶಾಂತಿ, ಅರಾಜಕತೆ ಉಂಟಾಗಿದ್ದುವು. ಸಣ್ಣಪುಟ್ಟ ಮಾಂಡಲಿಕರು ತಲೆಯೆತ್ತಿ ಪರಸ್ಪರ ಜಗಳವಾಡತೊಡಗಿದ್ದರು. ಇಂಥ ಸಂದರ್ಭದಲ್ಲಿ ಪ್ರಜೆಗಳು ಈ ಗೊಂದಲಮಯ ಪರಿಸ್ಥಿತಿಗೆ ತಮ್ಮಲ್ಲಿಯ ಅನೈಕ್ಯವೇ ಕಾರಣವೆಂಬುದನ್ನು ಮನಗಂಡರು. ಎಲ್ಲ ಸಾಮಂತರೂ ಮಾಂಡಲಿಕರೂ ನಾಯಕರೂ ತಮ್ಮತಮ್ಮ ಅಧಿಕಾರಗಳನ್ನು ಸ್ವ ಇಚ್ಛೆಯಿಂದಲೇ ಬಿಟ್ಟುಕೊಟ್ಟು, ಸರ್ವರಿಗೂ ಸಮ್ಮತನಾದ ನಾಯಕನೊಬ್ಬನನ್ನು ಆರಿಸಿದರು. ಅವನ ನೇತೃತ್ವದಲ್ಲಿ ಸಮರ್ಥವಾದ ರಾಜ್ಯವೊಂದಕ್ಕೆ ಅಸ್ತಿಭಾರ ಹಾಕಿದರು. ಇಂಥ ತೀರ್ಮಾನ ಭಾರತದ ಇತಿಹಾಸದಲ್ಲಿಯೇ ಅಪರೂಪವಾದ್ದಾಗಿತ್ತು. ಇದೊಂದು ರಕ್ತರಹಿತ ಬದಲಾವಣೆ. ಇದರ ಫಲವಾಗಿ ಸರ್ವಸಮ್ಮತವಾಗಿ ಆರಿಸಿ ಬಂದ ನಾಯಕ ಗೋಪಾಲ. 

	ಸುಮಾರು 756ರಿಂದ 783ರ ವರೆಗೆ ಆಳಿದ ಗೋಪಾಲನ ತಂದೆ ವಪ್ಯಟ, ತಾತ ದಯಿತವಿಷ್ಣು. ಧರ್ಮಪಾಲನ ಖಾಲಿಂಪುರ ತಾಮ್ರಶಾಸನದಲ್ಲಿ ಇವರನ್ನು ಉಲ್ಲೇಖಿಸಲಾಗಿದೆ. ಇವರಿಬ್ಬರನ್ನು ಕುರಿತು ಖಚಿತವಾಗಿ ಏನೂ ತಿಳಿಯದು. ಟಿಬೆಟ್ ಬೌದ್ಧ ಗ್ರಂಥಕರ್ತನಾದ ತಾರಾನಾಥ ಗೋಪಾಲನನ್ನು ಕುರಿತಾದ ಒಂದು ಜಾನಪದ ಕತೆಯನ್ನು ಹೆಣೆದಿದ್ದಾನಾದರೂ ಅದು ಅಸಂಗತ. ಗೋಪಾಲನ ಪತ್ನಿ ದೇದ್ದ ದೇವಿ ಭದ್ರಾತ್ಮಜಳೆಂದು ಶಾಸನ ಹೇಳಿದೆ. ಭದ್ರ ಎಂಬುದು ಅರಸನ ಹೆಸರೇ, ಒಂದು ಪಂಗಡದ ಹೆಸರೇ ಅಥವಾ ಸಮತಟದಲ್ಲಿಯ (ಈಗಿನ ಪಶ್ಚಿಮ ಬಂಗಾಳ) ಒಂದು ವಂಶದ ಹೆಸರೇ ಎಂಬುದೂ ಇನ್ನೂ ನಿಶ್ಚಯವಾಗಿಲ್ಲ. ಮೂಲತಃ ಇವರು ಬಂಗಾಳದ ಯಾವ ಭಾಗಕ್ಕೆ ಸೇರಿದವರು ಎಂಬ ಪ್ರಶ್ನೆಯೂ ಕಗ್ಗಂಟಾಗಿದೆ. ಗೋಪಾಲ ಪುಂಡ್ರವರ್ಧನದಲ್ಲಿ ಜನಿಸಿದನೆಂಬ ತಾರಾನಾಥನ ಹೇಳಿಕೆಯನ್ನು ಗಮನಿಸಿದರೆ ವಂಗಾಲ-ಆಗ್ನೇಯ ವಂಗಾಲ-ಇವನ ಮೂಲ ಸ್ಥಾನವಾಗಿದ್ದಿರಬಹುದೆನಿಸುತ್ತದೆ. ಆದರೆ ಇದೂ ಸಂದೇಹಾಸ್ಪದವೇ. 

	ಏನೇ ಇದ್ದರೂ ಜನನಾಯಕನಾಗಿ ಆರಿಸಲ್ಪಟ್ಟ ಗೋಪಾಲ ತನ್ನ ಆಯ್ಕೆ ಉತ್ತಮವಾದ್ದೆಂಬುದನ್ನು ಸಮರ್ಥಿಸಿಕೊಂಡ. ಮತ್ಸ್ಯನ್ಯಾಯವನ್ನು ಕೊನಗಾಣಿಸುವ ಸಲುವಾಗಿ ಪ್ರಜೆಗಳಿಂದ ಈತ ಆರಿಸಲ್ಪಟ್ಟನೆಂದು ಶಾಸನದಲ್ಲಿ ಹೇಳಿದೆ. ತನ್ನ ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಿದ ಬಳಿಕ ಈತ ರಾಜ್ಯವನ್ನು ಸಮುದ್ರ ಪರ್ಯಂತ ವಿಸ್ತರಿಸಿದ. ಅಂಗ ಮತ್ತು ಮಗಧ ರಾಜ್ಯಗಳೂ ಇವರ ಕೈಸೇರಿದುವು. ಮುಂದೆ ಪ್ರಬಲವಾದ ಪಾಲ ಸಾಮ್ರಾಜ್ಯಕ್ಕೆ ದೃಢವಾದ ತಳಪಾಯವನ್ನು ಈತ ಹಾಕಿದ. ದಕ್ಷವಾದ ಆಡಳಿತವನ್ನು ನೆಲೆಗೊಳಿಸಿದ. 

	ಬೌದ್ಧ ಧರ್ಮವನ್ನವಲಂಬಿಸಿದ ಈ ಅರಸ ಒದಂತಪುರಿಯ ಸಮೀಪದಲ್ಲಿ ನಲೇಂದ್ರ ದೇವಾಲಯವನ್ನು ಕಟ್ಟಿಸಿದನೆಂದು ತಾರಾನಾಥ ಹೇಳಿದ್ದಾನೆ. ನಾಲಂದ ವಿಹಾರವೂ ಈತ ಕಟ್ಟಿಸಿದ್ದೇ ಎಂದು ಹಲವರ ಹೇಳಿಕೆ. ಇವೆರಡೂ ಭಿನ್ನವಾದವುಗಳೆಂಬ ಅಭಿಪ್ರಾಯವನ್ನು ಎಲ್ಲರೂ ಒಪ್ಪಿಲ್ಲ.							(ಜಿ.ಬಿ.ಆರ್.; ಜಿ.ಆರ್.ಆರ್.)

	ಪಾಲವಂಶದ ದೊರೆಗಳಲ್ಲಿ ಇನ್ನಿಬ್ಬರರು ಗೋಪಾಲರು ಇದ್ದರೆಂದು ತಿಳಿದುಬರುತ್ತದೆ. 2 ನೆಯ ಗೋಪಾಲ ರಾಜ್ಯಪಾಲನ ಮಗ. ಈತ ಬಹುಶಃ 940-957 ರಲ್ಲಿ ಆಳಿದ. 3 ನೆಯ ಗೋಪಾಲ ರಾಮಪಾಲನ ಮಗನಾದ ಕುಮಾರ ಪಾಲನ ಮಗ. ಈತ ಸ್ವಲ್ಪಕಾಲ ಆಳಿದ ಮೇಲೆ ಇವನ ರಾಜ್ಯವನ್ನು ಚಿಕ್ಕಪ್ಪ ಮದನಪಾಲ ಕಿತ್ತುಕೊಂಡನೆಂದು (ಸು. 1145) ಹೇಳಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ